ಸಾಮಾನ್ಯವಾಗಿ ಜನರು ರಸ್ತೆಯಲ್ಲೊಬ್ಬ ಹುಚ್ಚ/ ಹುಚ್ಚಿ ಹೋಗುತ್ತಿದ್ದರೆ ಸಾಕು ಆಡಿಕೊಂಡು ನಗುತ್ತಾರೆ, ಅವರ ಸ್ಥಿತಿಯನ್ನು ಕಂಡೂ ಕಾಣದವರ ಹಾಗೆ ಹೋಗುತ್ತಾರೆ ಅಥವಾ ಭಯದಿಂದ ಓಡುತ್ತಾರೆ. ಅಂಥವರು ನೋಡುವುದಕ್ಕೂ ಹಾಗೆಯೇ ಇರುತ್ತಾರೆ ಬಿಡಿ! ಆದರೆ ಇಲ್ಲೊಬ್ಬ ಅರೆಹುಚ್ಚನನ್ನು ಕಂಡರೆ ಬಯ್ಯುವವರೂ ಇಲ್ಲ, ನಿರ್ಲಕ್ಷ ಮಾಡುವವರೂ ಇಲ್ಲ, ಬದಲಾಗಿ ಪ್ರೀತಿಯಿಂದ ಅಪ್ಪಾಜಿ ಎಂದೇ ಕರೆದು ಮಾತನಾಡಿಸುತ್ತಿದ್ದರು. ಇಂದು ಆತ ಇಲ್ಲವಾಗಿ ಊರಿಗೆ ಊರೇ ಬೇಸರಗೊಂಡಿದೆ.

ಹೌದು, ಹೂವಿನಹಡಗಲಿಯಲ್ಲಿ ವಾಸವಾಗಿದ್ದ ಬಸವರಾಜ್, ಬಸ್ಯಾ ಅರೆಹುಚ್ಚ. ಆತ ಯಾಕೆ ಹುಚ್ಚನಾದ ಎನ್ನುವ ಕಾರಣ ಯಾರಿಗೂ ಗೊತ್ತಿಲ್ಲ. ಆದರೆ ಆತ ಅರೆಹುಚ್ಚನೆ ಆಗಿದ್ದರೂ ಹೂವಿನಹಡಗಲಿ ಜನ ಅವನೊಂದಿಗೆ ಚೆನ್ನಾಗಿಯೇ ಇದ್ದರು. ಕೆದರಿದ ಕೂದಲು, ಕೊಳಕು ಬಟ್ಟೆ ತೊಟ್ಟು ಮೊಗದಲ್ಲೊಂದು ನಿಷ್ಕಲ್ಮಶ ನಗುವನ್ನು ಹೊತ್ತು ಅಂಗಡಿಗಳಿಗೆ ಬರುತ್ತಿದ್ದ ಬಸ್ಯಾ ತಮಗೆ ಅದೃಷ್ಟ ಎನ್ನುತ್ತಿದ್ದರು ಅಂಗಡಿ ಮಾಲೀಕರು.

ಅಷ್ಟೇಅಲ್ಲ ಉಪಮುಖ್ಯಮಂತ್ರಿಗಳಾಗಿದ್ದ ಡಿ.ಎಂ.ಪಿ ಪ್ರಕಾಶ್ ಮೊದಲಾದವರು ಅಪ್ಪಾಜಿ ಎಂದೇ ಕರೆಯುತ್ತಿದ್ದರು ಬಸ್ಯಾನನ್ನು. ಊರಿನಲ್ಲಿ ಎಲ್ಲರಿಗೂ ಹತ್ತಿರವಾಗಿದ್ದ ಬಸ್ಯಾ ಇನ್ನಿಲ್ಲ. ಇಡೀ ಊರಿನ ಒಂದು ಭಾಗವೇ ಆಗಿಹೋಗಿದ್ದ ಬಸ್ಯಾ ಇನ್ನಿಲ್ಲವಾದರೂ ಆತನ ಅಂತಿಮ ಸಂಸ್ಕಾರಕ್ಕೆ ಮಾತ್ರ ಊರಿಗೆ ಊರೇ ಬಂದಿತ್ತು. ಊರಿನ ಜನ ಸೇರಿ ಮೆರವಣಿಗೆಯ ಮೇಲೆ ಕರೆದೊಯ್ದು ಮಣ್ಣು ಮಾಡಿದರು. ಹುಚ್ಚನಾಗಿದ್ದರು ಬಸ್ಯಾನ ಅದೃಷ್ಟವೋ, ಊರಿನ ನಂಟೋ ಒಟ್ಟಿನಲ್ಲಿ ಬಸ್ಯಾ ಹಲವು ಹುಚ್ಚರಂತೆ ಅನಾಥ ಶ.ವವಾಗದೆ ಗಣ್ಯರಂತೆ ಗೌರವದಿಂದ ಸಂಸ್ಕಾರಮಾಡಿಸಿಕೊಂಡ.