Advertisements

ರುಚಿಯಾದ ರವಾ ಮೈಸೂರ್ ಪಾಕ್ ಮಾಡುವ ಸುಲಭ ವಿಧಾನ..

Kannada News

ಮೈಸೂರ್ ಪಾಕ್ ಅಂದ್ರೆ ಮೈದಾ ಹಿಟ್ಟು ಹಾಗೊ ಇತರ ಸಾಮಗ್ರಿಗಳನ್ನ ಹಾಕಿ ತಯಾರಿಸುವಂಥದ್ದು ಅಂತ ಎಲ್ಲರಿಗೂ ಗೊತ್ತಿರುವ ವಿಷಯ. ಹಾಗಾಗಿ ಈ ಮೈಸೂರ್ ಪಾಕ್ ಮಾಡುವುದು ಅಷ್ಟು ಸುಲಭವೂ ಅಲ್ಲ. ಮನೆಯಲ್ಲಿಯೇ ಮಾಡಬೇಕು ಅಂದುಕೊಂಡು ಎಷ್ಟೋ ಜನ ವಿಫಲವಾಗಿದ್ದೂ ಇದೆ. ಹಾಗಾಗಿ ರವಾದಿಂದ ಮಾಡಬಹುದಾದ ಒಂದು ಅತ್ಯಂತ ರುಚಿಕಟ್ಟಾದ ಮೈಸೂರ್ ಪಾಕ್ ರೆಸಿಪಿಯನ್ನು ನಾವಿಲ್ಲಿ ಹೇಳುತ್ತೇವೆ. ಮುಂದೆ ಓದಿ..

Advertisements
Advertisements

ರವಾ ಮೈಸೂರ್ ಪಾಕ್ ಮಾಡಲು ನಮಗೆ ಬೇಕಾಗಿರುವ ಸಾಮಗ್ರಿಗಳು: ಚಿರೋಟಿ ರವಾ-ಒಂದು ಕಪ್, ತುಪ್ಪ- ಅರ್ಧ ಕಪ್, ಸಕ್ಕರೆ – ಮುಕ್ಕಾಲು ಕಪ್, ಹಾಲಿನ ಪೌಡರ್ – ಮುಕ್ಕಾಲು ಕಪ್, ಏಲಕ್ಕಿ ಪುಡಿ – ಸ್ವಲ್ಪ ಹಾಗೂ ನೀರು. ಇವಿಷ್ಟಿದ್ದರೆ ಸಾಕು ಸುಲಭವಾಗಿ ರವಾ ಮೈಸೂರು ಪಾಕ್ ತಯಾರಿಸಿಕೊಳ್ಳಬಹುದು. ರವಾ ಮೈಸೂರ್ ಪಾಕ್ ಮಾಡುವ ವಿಧಾನ: ರುಚಿಕಟ್ಟಾದ ಈ ರವಾ ಮೈಸೂರ್ ಪಾಕ್ ಮಾಡಲು ಮೊದಲು ಒಂದು ಬಾಣಲೆಗೆ ಅರ್ಧ ಕಪ್ ತುಪ್ಪವನ್ನು ಹಾಕಿ ಬಿಸಿ ಮಾಡಲು ಇಡಿ. ನಂತರ ಒಂದು ಕಪ್ ಚಿರೋಟಿ ರವಾ ಅಥವಾ ಬಾಂಬೆ ರವಾವನ್ನು ಬಾಣಲಿಗೆ ಹಾಕಿ ಮಿಶ್ರಣ ಮಾಡಿ. ಇದನ್ನು ಚೆನ್ನಾಗಿ ಹುರಿಯಿರಿ.

ಈ ತಿನಿಸನ್ನು ಸಂಪೂರ್ಣವಾಗಿ ಕಡಿಮೆ ಉರಿಯಲ್ಲಿಯೇ ಮಾಡಬೇಕು. ರವಾ ಬಣ್ಣ ಬದಲಾಗುವವರೆಗೆ ಹುರಿಯಿರಿ. ತುಪ್ಪ ಇದೀಗ ನಿಧಾನವಾಗಿ ರವೆಯಿಂದ ಬಿಟ್ಟುಕೊಳ್ಳಲು ಆರಂಭವಾಗುತ್ತದೆ. ಆಗ ಬಾಣಲೆಯನ್ನು ಇಳಿಸಿ. ಇದಕ್ಕೆ ಸ್ವಲ್ಪಸ್ವಲ್ಪವೇ ಹಾಲಿನ ಪುಡಿಯನ್ನು ಹಾಕಿ ಮಿಶ್ರಣ ಮಾಡಿ. ಇದು ಚೆನ್ನಾಗಿ ಒಂದಕ್ಕೊಂದು ಗಂಟಿಲ್ಲದಂತೆ ಮಿಶ್ರಣವಾಗುವ ಹಾಗೆ ನೋಡಿಕೊಳ್ಳಿ. ಇದನ್ನು ಒಂದು ಬದಿಯಲ್ಲಿ ತೆಗೆದಿಟ್ಟು, ಇನ್ನೊಂದು ಪಾತ್ರೆಗೆ ಒಂದು ಕಪ್ ಸಕ್ಕರೆಯನ್ನು ಹಾಕಿ, ಅದಕ್ಕೆ ಮುಕ್ಕಾಲು ಕಪ್ ಆಗುವಷ್ಟು ನೀರನ್ನು ಬೆರೆಸಿ ಕುದಿಸಿ. ಸಕ್ಕರೆ ಸ್ವಲ್ಪ ಅಂಟು ಪಾಕ ಬರುವವರೆಗೆ ಕುದಿಸಿ.

ನಂತರ ಸಕ್ಕರೆ ಪಾಕಕ್ಕೆ ರವಾ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಏಲಕ್ಕಿ ಪುಡಿಯನ್ನೂ ಸೇರಿಸಿ ಐದು ನಿಮಿಷಗಳ ಕಾಲ ಹುರಿಯಿರಿ. ಈ ಮಿಶ್ರಣವು ಇಂದು ಉಂಡೆಯನ್ನು ಕಟ್ಟುವ ಹದಕ್ಕೆ ಬಂದ ಕೂಡಲೆ (ಹದವನ್ನು ಪರೀಕ್ಷೆ ಮಾಡಲು ಒಂದು ಪ್ಲೇಟ್ ಗೆ ಎಣ್ಣೆ ಸವರಿ ಸ್ವಲ್ಪ ಮಿಶ್ರಣವನ್ನು ಹಾಕಿ, ಇದು ಕೈಗೆ ಅಂಟದಂತೆ ಉಂಡೆ ಆಕಾರ ಮಾಡಲು ಸಾಧ್ಯವಾದರೆ ಮಿಶ್ರಣ ಸಿದ್ಧವಾಗಿದೆ ಎಂದು ಅರ್ಥ) ಅದನ್ನು ಒಂದು ತುಪ್ಪ ಸವರಿದ ಪಾತ್ರೆಗೆ (ಚೌಕಾಕಾರದ ಪಾತ್ರೆ ಆಗಿರಬೇಕು) ಸುರಿಯಿರಿ. ಅಗತ್ಯವಿದ್ದರೆ ಅಲಂಕಾರಕ್ಕೆ ಪಿಸ್ತಾ, ಬಾದಾಮಿ, ಗೋಡಂಬಿಗಳನ್ನು ಇದರ ಮೇಲೆ ಹಾಕಬಹುದು. ಇದನ್ನು ಸ್ವಲ್ಪ ಆರಿದ ಮೇಲೆ ಮೈಸೂರ್ ಪಾಕ್ ಗಾತ್ರದಲ್ಲಿ ಚಾಕು ಸಹಾಯದಿಂದ ಕತ್ತರಿಸಿ. ಸಂಪೂರ್ಣ ಆರಿದ ಮೇಲೆ ಇನ್ನೊಮ್ಮೆ ಸರಿಯಾಗಿ ಕತ್ತರಿಸಿದ ಪಾತ್ರೆಯಿಂದ ತೆಗೆಯಿರಿ. ರುಚಿಯಾದ ರವಾ ಮೈಸೂರ್ ಪಾಕ್ ಸವಿಯಲು ಸಿದ್ಧ!